
"ಅವಳ ಹೆಜ್ಜೆ " ಕಿರುಚಿತ್ರೋತ್ಸವ - 2025
ಮೊದಲೆರಡು ಪ್ರದರ್ಶನ ಮಿಸ್ ಮಾಡಿದ್ದೀರಾ? ಚಿಂತೆಯಿಲ್ಲ — ಇನ್ನೊಂದು ಅವಕಾಶವಿದೆ!
ಮಹಿಳೆಯರೇ ತಯಾರಿಸಿದ ಕನ್ನಡ ಕಿರುಚಿತ್ರಗಳ ಸ್ಪರ್ಧೆಯಲ್ಲಿ ಆಯ್ಕೆಯಾದ ಕಿರುಚಿತ್ರಗಳ ಮರು ಪ್ರದರ್ಶನ
ಸೆಪ್ಟೆಂಬರ್ 21, 2025, ಭಾನುವಾರ, 10 am - 1 pm
ವಿಳಾಸ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
ಪುರವಂಕರ ಸಭಾಂಗಣ
36, 9ನೇ ಮುಖ್ಯ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು – 560070
ಹತ್ತಿರದ ಮೆಟ್ರೋ: ಜಯನಗರ
ಸ್ಪರ್ಧೆಯಲ್ಲಿ ಆಯ್ಕೆಯಾದ ಕಿರುಚಿತ್ರಗಳ ಮೊದಲ ಪ್ರದರ್ಶನ ಮತ್ತು ಪ್ರಶಸ್ತಿ ವಿಜೇತರ ಘೋಷಣೆ ಜೂನ್ 14, 2025 ರಂದು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC) ನಲ್ಲಿ ನಡೆಯಿತು. ಚಿತ್ರೋತ್ಸವದ ಮುಖ್ಯ ಅತಿಥಿ, ಖ್ಯಾತ ನಿರ್ದೇಶಕಿ ಡಿ. ಸುಮನ್ ಕಿತ್ತೂರು ಅವರ ಸಮಕ್ಷಮದಲ್ಲಿ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಮೊದಲ ಪ್ರದರ್ಶನದಲ್ಲಿ ಲಭಿಸಿದ ಆದರಣೀಯ ಪ್ರತಿಕ್ರಿಯೆ ಮತ್ತು ಬೆಂಬಲದಿಂದ, ಕಿರುಚಿತ್ರಗಳ ಪುನರ್ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಜುಲೈ 12, 2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ನಲ್ಲಿ ಎರಡನೇ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೂರನೇ ಪ್ರದರ್ಶನ ಭಾನುವಾರ, ಸೆಪ್ಟೆಂಬರ್ 21, 2025 ರಂದು ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಸಂಸ್ಕೃತಿ ಅಕಾಡೆಮಿಯಲ್ಲಿ .
"ಅವಳ ಹೆಜ್ಜೆ " ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರೋತ್ಸವ
ಎರಡನೇ ಆವೃತ್ತಿ 2026 ರ ಚಿತ್ರೋತ್ಸವಕ್ಕೆ ಕಿರುಚಿತ್ರಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುವುದು.
ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ "ಅವಳ ಹೆಜ್ಜೆ ಕಿರುಚಿತ್ರೋತ್ಸವ" ಕೇವಲ ಕಿರುಚಿತ್ರ ಪ್ರದರ್ಶನವಲ್ಲ . ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಸಾಂಸ್ಕೃತಿಕ ಚಳವಳಿ.
ಕ್ಯಾಮೆರಾ ಹಿಂದೆ ಮಹಿಳೆ ಇಲ್ಲದಿದ್ದರೆ, ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ದೃಶ್ಯಮಾಧ್ಯಮವು ಮಹಿಳೆಯರ ಬದುಕು, ಕತೆಗಳು ಮತ್ತು ದೃಷ್ಟಿಕೋನಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಶಕ್ತಿಯುತವಾಗಿರುವುದರಿಂದ, ಮಹಿಳಾ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವುದು ಹಾಗೂ ಅವರ ಕಥನೆಗಳಿಗೆ ಸಬಲ ವೇದಿಕೆ ಒದಗಿಸುವುದು ಈ ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ.
"ಅವಳ ಹೆಜ್ಜೆ ಕಿರುಚಿತ್ರೋತ್ಸವ-2025"ದ ವಿಶೇಷವೇನೆಂದರೆ, ಮಹಿಳೆಯರೇ ತಯಾರಿಸಿದ ಕನ್ನಡ ಕಿರುಚಿತ್ರಗಳಿಗೆ ಮಾತ್ರ ಮೀಸಲಾಗಿರುವ ಸ್ಪರ್ಧೆಯೊಂದನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದು. 2025ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಿರುಚಿತ್ರಗಳ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸಿತ್ತು.. ಅಮೇರಿಕಾದ ಕನ್ನಡತಿಯೊಬ್ಬರು, 14 ವರ್ಷದ ಕಿರಿಯ ಕಲಾವಿದೆಯೂ ಸೇರಿದಂತೆ, ರಾಜ್ಯಾದ್ಯಂತ ವಿವಿಧ ಹಿನ್ನೆಲೆಯ ಮಹಿಳೆಯರು ನಿರ್ದೇಶಿಸಿದ ಸುಮಾರು 60 ಕಿರುಚಿತ್ರಗಳು ಸಲ್ಲಿಕೆಯಾಗಿದ್ದವು. ಆಯ್ಕೆ ಪ್ರಕ್ರಿಯೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಮೊದಲ ಬಹುಮಾನ ₹1 ಲಕ್ಷ ನಗದು ಮತ್ತು "ಅವಳ ಹೆಜ್ಜೆ" ಪ್ರಶಸ್ತಿಯನ್ನು ಪಡೆದ ಕನ್ನಡ ಕಿರುಚಿತ್ರ ಕವಿತಾ ಬಿ ನಾಯಕ್ ನಿರ್ದೇಶನದ "ಅನ್ ಹರ್ಡ್ ಎಕೋಸ್".
ಮೊದಲ ಬಹುಮಾನ ₹1 ಲಕ್ಷ ನಗದು ಮತ್ತು "ಅವಳ ಹೆಜ್ಜೆ" ಪ್ರಶಸ್ತಿಯನ್ನು ಪಡೆದ ಕಿರುಚಿತ್ರ
'ಅನ್ಹರ್ಡ್ ಎಕೋಸ್' (2025)

ಒಂದು ಕುಗ್ರಾಮದಲ್ಲಿ ಅವರಿವರ ಹೊಲದಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿರುವ ಭರಮಪ್ಪ, ತನ್ನ ಮಗಳು ನೀಲಾ ಬೇರೆ ಜಾತಿಯ ಯುವಕನೊಂದಿಗೆ ಸಲುಗೆಯಿಂದ ಇರುವುದನ್ನು ನೋಡಿ, ತನ್ನ ಸಮುದಾಯದಲ್ಲಿ ಎದುರಿಸಬೇಕಾದ ಅವಮಾನ, ದಂಡವನ್ನು ನೆನೆದು ವಿಚಲಿತನಾಗುತ್ತಾನೆ. ನೀಲಾ ಸ್ವತಂತ್ರ ಬದುಕಿನ ಕನಸು ಮತ್ತು ಕುಟುಂಬದ ಮೇಲಿನ ನಿಷ್ಠೆಯ ನಡುವೆ ತೊಳಲುತ್ತಾಳೆ. ಈ ಚಿತ್ರವು ಜಾತಿ ಬೇದ, ಕಟ್ಟುನಿಟ್ಟಾದ ಸಾಮಾಜಿಕ ನಿರ್ಮಾಣಗಳು ಮತ್ತು ಪರಂಪರೆ ಹಾಗೂ ಗೌರವದ ಹೆಸರಿನಲ್ಲಿ ಮಹಿಳೆಯರು ಎದುರಿಸುವ ಹಿಂ ಸೆಗೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸುತ್ತದೆ.
ನಿರ್ದೇಶಕಿ: ಕವಿತಾ ಬಿ ನಾಯಕ್

ಮೂಲತಃ ಕಡೂರು ತಾಲ್ಲೂಕಿನ ಕವಿತಾ ಬಿ ನಾಯಕ್ ರಂಗಭೂಮಿ ಕಲ ಾವಿದೆ ಮತ್ತು ನಿರ್ದೇಶಕಿ. ಅವರ ಮೊದಲ ನಾಟಕ 'ಅವಳ ಹೆಜ್ಜೆ' ಮೂಲಕ ಮಹಿಳೆಯೊಬ್ಬಳು ಕಾಲ್ ಸೆಂಟರ್ನಲ್ಲಿ ಎದುರಿಸುವ ಸಂಕಷ್ಟಗಳನ್ನು ಚಿತ್ರಿಸಿದ್ದಾರೆ. ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ನಿರ್ದೇಶನ ಮತ್ತು ಚಿತ್ರಕಥೆಗಳಲ್ಲಿ ಡಿಪ್ಲೋಮಾ ಪಡೆದು ಹದಿನೇಳೆಂಟು ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ‘ಗ್ಲೀ’ ಕಿರುಚಿತ್ರಕ್ಕಾಗಿ ಬಹುಮಾನ ಪಡೆದಿದ್ದಾರೆ. ಸಿನಿಮಾ ಮಾಧ್ಯಮದ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಆಶಯ ಇವರದು.
ವಿದ್ಯಾರ್ಥಿನಿ ವಿಶೇಷ ವರ್ಗದಲ್ಲಿ ₹10,000 ನಗದು ಬಹುಮಾನ ಪಡೆದ ಕಿರುಚಿತ್ರ
'ಪುಷ್ಪ' (2024)
.jpg)
ಪುಷ್ಪ, ಒಬ್ಬ ಒಬ್ಬಂಟಿ ತಾಯಿ, ತನ್ನ ಮಗ ವಿಶ್ವನ ಭವಿಷ್ಯಕ್ಕಾಗಿ ಸಮಾಜದ ತಿರಸ್ಕಾರಗಳನ್ನು ಎದುರಿಸುತ್ತಾ, ಸಂಕಷ್ಟಗಳ ನಡುವೆ ಜೀವನವನ್ನು ಸಾಗಿಸುತ್ತಾಳೆ. ಗಾರ್ಮೆಂಟ್ ಕಾರ್ಖಾನೆಯಲ್ಲಿ ಶೋಷಣೆಯೊಂದಿಗೆ ದುಡಿಯುವಾಗಲೂ, ತನ್ನ ಮಗನನ್ನು ಈ ಕಠಿಣ ಲೋಕದಿಂದ ರಕ್ಷಿಸಲು ಅವಳು ನಿರಂತರ ಹೋರಾಟ ಮಾಡುತ್ತಾಳೆ. ವಿಶ್ವ ಬೆಳೆದಂತೆ, ತಾಯಿಯ ಬಗ್ಗೆ ಅವನಲ್ಲಿ ಪ್ರಶ್ನೆಗಳು ಮೂಡುತ್ತವೆ. ಈ ನಡುವೆ ಸಂಭವಿಸುವ ದುಃಖದ ಘಟನೆ ಪುಷ್ಪಳ ಅಂತರಾಳದ ಶಕ್ತಿಯನ್ನು ಪುನರ್ಜೀವಂತಗೊಳಿಸುತ್ತದೆ. ಪುಷ್ಪ ಒಬ್ಬ ತಾಯಿಯ ಆತ್ಮವಿಶ್ವಾಸ, ತ್ಯಾಗ ಮತ್ತು ನ್ಯಾಯಕ್ಕಾಗಿ ಹೋರಾಟದ ಶಕ್ತಿಶಾಲಿ ಕಥೆ.
ನಿರ್ದೇಶಕಿ: ಕ್ಷಮಾ ಅಂಬೆಕಲ್ಲು
_JPG.jpg)
ಕ್ಷಮಾ ಅಂಬೆಕಲ್ಲು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನವರು. ಪ್ರಸ್ತುತ ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್ನಲ್ಲಿ ದೃಶ್ಯ ಮಾಧ್ಯಮ ವಿಭಾಗದಲ್ಲಿ B.Sc ಓದುತ್ತಿದ್ದಾರೆ. ಬರವಣಿಗೆ ಹಾಗೂ ನಿರ್ದೇಶನದಲ್ಲಿ ಆಸಕ್ತಿ ಹೊಂದಿರುವ ಇವರು ಹಲವು ಕಿರುಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪುಷ್ಪ ಅವರ ಚೊಚ್ಚಲ ನಿರ್ದೇಶನದ ಕಿರುಚಿತ್ರವಾಗಿದ್ದು, ಈಗಾಗಲೇ 10 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ.
ಪ್ರಥಮ ನಿರ್ದೇಶನದ ವಿಶೇಷ ವರ್ಗದಲ್ಲಿ ₹10,000 ನಗದು ಬಹುಮಾನ ಪಡೆದ ಕಿರುಚಿತ್ರ
'ದಿ ಲಾಸ್ಟ್ ಹ್ಯಾಪಿ ಕಸ್ಟಮರ್' (2024)
.png)
ದಿ ಲಾಸ್ಟ್ ಹ್ಯಾಪಿ ಕಸ್ಟಮರ್ ಕಥಾನಾಯಕಿ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಗೀತಾ ಎಂಬ ಯುವತಿ. CA ಆಟಿ೯ಕಲ್ಷಿಪ್ ಮಾಡುತ್ತಾ, ತಾನು ಗಳಿಸುವ ಪ್ರತಿಯೊಂದು ರೂಪಾಯಿಯನ್ನೂ ತನ್ನ EMI ಗಳು ಮತ್ತು ತಮ್ಮನ ವಿದ್ಯಾಭ್ಯಾಸಕ್ಕಾಗಿ ಮುಡಿಪಾಗಿಡುತ್ತಾಳೆ. ಒಂದು ದಿನ ಅವಳ ಒಂದು EMI ಸಂಪೂರ್ಣವಾಗಿ ತೀರಿಸಿರುವುದನ್ನು ಅವಳು ಗಮನಿಸುತ್ತಾಳೆ. ಈ ಮೂಲಕ ಅವಳಿಗೆ ಸಣ್ಣ ಪ್ರಮಾಣದ ಆರ್ಥಿಕ ಸ್ವಾತಂತ್ರ್ಯ ಸಿಗುತ್ತದೆ. ಆ ಸ್ವಾತಂತ್ರ್ಯದಿಂದ ಅವಳು ಏನು ಮಾಡುತ್ತಾಳೆ ಎಂಬುದೇ ಈ ಕಥೆಯ ಮೂಲ. ಒಂದು ಶಾಂತ ಕ್ರಾಂತಿಯ ಆರಂಭ.
ನಿರ್ದೇಶಕಿ: ಮಂದಾರ ಬಟ್ಟಲಹಳ್ಳಿ
_JPG.jpg)
ಮಂದಾರ ಬಟ್ಟಲಹಳ್ಳಿ ಬ್ಲಿಂಕ್, ಹೊಸ ದಿನಚರಿ, ಓಲ್ಡ್ ಮಾಂಕ್ ಮತ್ತು ಆಚಾರ್ ಅಂಡ್ ಕೋ ಸಿನಿಮಾಗಳಲ್ಲಿ ನಟಸಿದ್ದಾರೆ. ಸೆಟ್ನಲ್ಲಿರುವ ಮಾಯಾಜಾಲವೇ ನಿರ್ದೇಶನದ ಬೀಜವನ್ನು ಅವರ ಹೃದಯದಲ್ಲಿ ನೆಟ್ಟು ಸಿನಿಮಾ ಮಾಧ್ಯಮದ ಮೂಲಕ ಕಥೆಗಳನ್ನು ಹೇಳಬೇಕೆಂಬ ಹಂಬಲವನ್ನು ಮತ್ತಷ್ಟು ಗಟ್ಟಿಯಾಮಾಡಿತು. ದಿ ಲಾಸ್ಟ್ ಹ್ಯಾಪಿ ಕಸ್ಟಮರ್ ಕಿರುಚಿತ್ರ ಆ ಕನಸಿನತ್ತ ಅವರ ಮೊದಲ ಹೆಜ್ಜೆ - ಅವರ ಸಿನಿಮಾ ಪ್ರೀತಿಯಿಂದ ಮತ್ತು ಬದ್ಧತೆಯಿಂದ ರೂಪುಗೊಂಡ ಒಂದು ಪ್ರಾಮಾಣಿಕ ಪ್ರಯತ್ನ.
ಸಮಾಧಾನಕರ ಬಹುಮಾನ ₹5,000 ನಗದು ಪಡೆದ ಕಿರುಚಿತ್ರ
'ಕೇಕ್ ವಾಕ್' (2025)
_JPG.jpg)
ಮಲ್ಲಿಕಾ ಎಂಬ ಹದಿನೈದು ವರ್ಷದ ಹುಡುಗಿ, ತನ್ನ ತಂದೆತಾಯಿಗಳ ಅನುಕೂಲಕ್ಕೆ ಅನುಗುಣವಾಗಿ, ಕೆಲವೊಮ್ಮೆ ಚಿಕ್ಕವಳಂತೆ ಮತ್ತು ಕೆಲವೊಮ್ಮೆ ದೊಡ್ಡವಳಂತೆ ನಡೆದುಕೊಳ್ಳಬೇಕಾದ ತೂಗುಯ್ಯಾಲೆಯ ಜೀವನ ನಡೆಸುತ್ತಿದ್ದಾಳೆ. ಈ ರೀತಿಯ ದ್ವಂದ್ವ ಅವಳ ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನು ಈ ಕಿರುಚಿತ್ರದಲ್ಲಿ ಅನಾವರಣ ಮಾಡಲಾಗಿದೆ. ಎಷ್ಟಾದರೂ, ಹದಿಹರೆಯ ದಾಟುವುದು ನಿಜಕ್ಕೂ ‘ಕೇಕ್ವಾಕ್’ ಆಗಿರಬಹುದಾ?
ನಿರ್ದೇಶಕಿ: ಸಿಂಚನಾ ಶೈಲೇಶ್
_JPG.jpg)
ಸಿಂಚನಾ ಶೈಲೇಶ್ ಕಳೆದ ಹದಿನಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ, ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗೂ ಎರಡು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ನಿರ್ದೇಶನ ಕ್ಷೇತ್ರದಲ್ಲಿ ಕೆಲಸ ಮಾಡುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಸಮಾಧಾನಕರ ಬಹುಮಾನ ₹5,000 ನಗದು ಪಡೆದ ಕಿರುಚಿತ್ರ
'ಆನ್ ಲೈನ್' (2025)
.png)
ವಿವೇಕ್ ಮತ್ತು ರಾಹುಲ್ ಇಬ್ಬರೂ ಅಣ್ಣ–ತಮ್ಮಂದಿರು. ಒಂದು ದಿನ, ರಾಹುಲ್ ಕಾರು ಅಪಘಾತದಲ್ಲಿ ಸಾವಿಗೀಡಾಗುತ್ತಾನೆ. ಈ ದುಃಖದ ಸುದ್ದಿಯಿಂದ ಆಘಾತಗೊಂಡ ವಿವೇಕ್, ಮಾದಕ ವಸ್ತುಗಳ ನಶೆಯೇ ತಮ್ಮನ ಸಾವಿಗೆ ಕಾರಣ ಎಂಬುದನ್ನು ಅರಿಯುತ್ತಾನೆ. ಜೊತೆಗೆ, ಡ್ರಗ್ ಕಿಂಗ್ಪಿನ್ ದಶಾನಂದ್ ಈ ಮಾದಕವಸ್ತುಗಳನ್ನು ರಾಹುಲ್ಗೆ ಮಾರಿದ್ದಾನೆ ಎಂಬುದೂ ತಿಳಿದುಬರುತ್ತದೆ. ಸಿಟ್ಟಿನಿಂದ ಕಳವಳಗೊಂಡ ವಿವೇಕ್, ತನ್ನ ಸಹೋದರನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾನೆ.
ನಿರ್ದೇಶಕಿ: ಸತ್ಯ ಪ್ರಮೋದ ಎಂ.ಎಸ್
.jpg)
ಬೆಂಗಳೂರಿನ ಸತ್ಯ ಪ್ರಮೋದ ಎಂ.ಎಸ್ ಅವರು ಟೆಂಟ್ ಸಿನೆಮಾ ದಲ್ಲಿ ತರಬೇತಿ ಪಡೆದಿದ್ದು, 50ಕ್ಕೂ ಹೆಚ್ಚು ಸದಸ್ಯರ ತಂಡದ ನೇತೃತ್ವವಹಿಸಿ ತಮ್ಮ ಮೊದಲ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಸಹ ನಿರ್ದೇಶಕಿ ಮತ್ತು ಲೇಖಕಿಯಾಗಿಯೂ ಅನುಭವ ಹೊಂದಿದ್ದಾರೆ. ಸಮಾಜದಲ್ಲಿ ಬದಲಾವಣೆ ತರುವಂತಹ ಪ್ರಭಾವಶೀಲ ಕನ್ನಡ ಚಿತ್ರಗಳನ್ನು ನಿರ್ಮಿಸುವುದು ಅವರ ಗುರಿ.
ಮೆಚ್ಚುಗೆ ಗಳಿಸಿದ ಕಿರುಚಿತ್ರ
'ಉಭಯ' (2024)

ಈ ಕಿರುಚಿತ್ರದಲ್ಲಿ, ಒಬ್ಬ ಯುವತಿ ತನ್ನ ಜೀವನವನ್ನು ಅಂತ್ಯಗೊಳಿಸಲು ಯೋಚಿಸುತ್ತಾ ನಿಂತಿದ್ದಾಳೆ. ಆಗ, ಅವಳ ಆಂತರಿಕ ಕಳವಳ ಮತ್ತು ಭರವಸೆಗಳ ಸಾಕಾರವಾಗಿ, ಎರಡು ಅಲೌಕಿಕ ಪ್ರತೀಕಗಳು ಹೊರಹೊಮ್ಮುತ್ತವೆ. ಅವಳ ಆಂತರಿಕ ಹೋರಾಟಗಳು ಹಾಗೂ ಭಾವನೆಗಳು ಬಹಿರಂಗವಾಗುತ್ತಿದ್ದಂತೆ, ಮುಂದೆ ಸಾಗಲು ತನಗೆ ಏನು ಬೇಕು ಎಂಬ ಆಯ್ಕೆಯನ್ನು ತಾನಾಗೆ ನಿರ್ಧರಿಸುತ್ತಾಳೆ.
ನಿರ್ದೇಶಕಿ: ಚಂದನಾ ನಾಗ್

ಚಂದನಾ ನಾಗ್ ಚಲನಚಿತ್ರ ನಿರ್ದೇಶಕಿ, ನಟಿ ಮತ್ತು ಭರತನಾಟ್ಯ ಕಲಾವಿದೆ. ಯಜಮಾನ ಮತ್ತು ಕ್ರಾಂತಿ ಸೇರಿದಂತೆ ಕೆಲವು ಕನ್ನಡ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡಿದ್ದಾರೆ. "ಗಿಳಿಯು ಪಂಜರದೊಳಿಲ್ಲ", "ಉಭಯ" ಸೇರಿದಂತೆ ಹಲವು ಪ್ರಶಸ್ತಿ ವಿಜೇತ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ “ಕಿಂಟ್ಸುಗಿ” 2024ರ ನಾಟಕ ಬೆಂಗಳೂರು ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಗೆದ್ದಿದೆ. ಭಾರತದಾದ್ಯಂತ ಹಲವೆಡೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಪ್ರಭಾವಶಾಲಿ, ಅರ್ಥಪೂರ್ಣ ಪಾತ್ರಗಳನ್ನು ರೂಪಿಸುವತ್ತ ಅವರ ಒಲವು.
ಮೆಚ್ಚುಗೆ ಗಳಿಸಿದ ಕಿರುಚಿತ್ರ
'ಸೊಲೋ ಟ್ರಾವೆಲ್ಲರ್' (2023)
.jpg)
ತನ್ನ ತಾಯಿಯು ಯಾವಾಗಲೂ ತನ್ನ ಮೇಲೆ ಅವಲಂಬಿತವಾಗಿರುವುದರಿಂದ ಸ್ಪರ್ಶ ಬೇಸರಗೊಂಡಿದ್ದಾಳೆ. ಪುಣೆಗೆ ಹೋಗುವ ದಾರಿಯಲ್ಲಿ ಅವಳು ಭೇಟಿಯಾಗುವ ಒಬ್ಬ ಅಪರಿಚಿತೆಯಿಂದ ಸ್ಪರ್ಶಾಳ ದೃಷ್ಟಿಕೋನವೇ ಬದಲಾಗುತ್ತದೆ.
ನಿರ್ದೇಶಕಿ: ಮಾನಸ ಯು ಶರ್ಮ
.jpg)
ಮಾನಸ ಯು ಶರ್ಮಾ ಬೆಂಗಳೂರು ಮೂಲದ ಚಲನಚಿತ್ರ ನಿರ್ದೇಶಕಿ ಮತ್ತು ಚಿತ್ರಕಥೆಗಾರ್ತಿ, ಕಾಫಿ ಬೈಟ್ ಸ್ಟುಡಿಯೋಸ್ನ ಸಹ-ಸಂಸ್ಥಾಪಕಿ. ಅವರಿಗೆ ಎಂಟು ವರ್ಷಗಳ ಚಲನಚಿತ್ರ ಅನುಭವವಿದೆ.
ಮೆಚ್ಚುಗೆ ಗಳಿಸಿದ ಕಿರುಚಿತ್ರ
'ಹೌ ಆರ್ ಯು?' (2023)

ಟಿನಾಳ ಗಂಡ ರಾಯ್ ಆಕಸ್ಮಿಕವಾಗಿ ನಿಧನವಾದಾಗ ಅವಳ ಲೋಕವೇ ಒಡೆದು ಚೂರಾಗುತ್ತದೆ. ಭಯ ಮತ್ತು ಮನೋವ್ಯಥೆಯನ್ನು ಎದುರಿಸುತ್ತ ಅವಳು ಉತ್ತರಗಳಿಗಾಗಿ ಹುಡುಕುತ್ತಾಳೆ. ಅವರ ವಿವಾಹ ವಾರ್ಷಿಕೋತ್ಸವದಂದು ನಡೆಯುವ ಒಂದು ಅನಿರೀಕ್ಷಿತ ಘಟನೆ ಏಕಾಏಕಿ ಎಲ್ಲವನ್ನೂ ಬದಲಾಯಿಸುತ್ತದೆ - ಅವಳ ನೋವಿಗೆ ಒಂದು ಸ್ಪಷ್ಟತೆಯನ್ನು ನೀಡುತ್ತದೆ.
ನಿರ್ದೇಶಕಿ: ತೃಪ್ತಿ ಕುಲಕರ್ಣಿ
.jpg)
ತೃಪ್ತಿ ಕುಲಕರ್ಣಿ ಅವರು ಓರ್ವ ಉದಯೋನ್ಮುಖ ಚಲನಚಿತ್ರ ನಿರ್ದೇಶಕಿ. ಪಾತ್ರಧಾರಿಗಳೇ ಇಲ್ಲದೆ ಪಾದರಕ್ಷೆಗಳ ಮೂಲಕ ಕಥೆ ಹೇಳುವ ವಿಭಿನ್ನ ಪ್ರಯತ್ನ ಅವರ ಮೊದಲ ಕಿರುಚಿತ್ರ 'ಹೆಜ್ಜೆಗಳು' (2021). 'ಡೆಡ್ ಎಂಡ್' (2022) ಮತ್ತು ಹೌ ಆರ್ ಯು? (2023) ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಮಾನವ ಸ್ವಭಾವ ಮತ್ತು ವೈಯಕ್ತಿಕ ಅನುಭವಗಳು ಅವರ ಕಥೆಗಳಿಗೆ ಪ್ರೇರಣೆ.

ಸುನಯನ ಸುರೇಶ
ಬಹು ಪ್ರಶಸ್ತಿ ವಿಜೇತ ಪತ್ರಕರ್ತೆ ಮತ್ತು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಉಪಾಧ್ಯಕ್ಷೆ. ನಟರು, ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಮಾರ್ಗದರ್ಶಕರಾಗಿದ್ದಾರೆ. ಆಪಲ್ಬಾಕ್ಸ್ ಸ್ಟುಡಿಯೋಸ್, ಕೆಆರ್ಜಿ ಸ್ಟುಡಿಯೋಸ್, ಸಕ್ಕತ್ ಸ್ಟುಡಿಯೋ ಮತ್ತು ಶ್ರೀ ಸಾಯಿ ಆಂಜನೇಯ ಪಿಕ್ಚರ್ಸ್ನಂತಹ ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದ ತೀರ್ಪುಗಾರರಲ್ಲೊಬ್ಬರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಂಜೋತಾ ಭಂಡಾರಿ
ಎಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಚಲನಚಿತ್ರ ನಿರ್ಮಾಪಕಿ ಮತ್ತು ಕಥೆಗಾರ್ತಿ ಸಂಜೋತಾ ಭಂಡಾರಿ, ಮುಂಬೈನ ಡಿಜಿಟಲ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ ನಂತರ ತಂತ್ರಜ್ಞಾನದಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ವಿಷಯಾಧಾರಿತ ಚಲನಚಿತ್ರಗಳಿಗೆ ಹೆಸರುವಾಸಿಯಾದ ಅವರ ಕೃತಿಗಳಲ್ಲಿ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ (2015) ಮತ್ತು ಮೆಚ್ಚುಗೆ ಪಡೆದ ಹಾಸ್ಯ ಚಿತ್ರ ಲಂಗೋಟಿಮ್ಯಾನ್ (2024) ಸೇರಿವೆ.

ಮಧು ದೈತೋಟ
ಮಾಧ್ಯಮ ಕ್ಷೇತ್ರದಲ್ಲಿ ವ್ಯಾಪಕ ಅನುಭವ ಹೊಂದಿರುವ ಹಿರಿಯ ಪತ್ರಕರ್ತೆಯಾದ ಇವರು ಚಲನಚಿತ್ರ ಉತ್ಸಾಹಿಯೂ ಆಗಿದ್ದು, ಸಿನಿಮಾವನ್ನು ವಿಶ್ಲೇಷಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪತ್ರಿಕೋದ್ಯಮಕ್ಕೆ ಅವರ ಬದ್ಧತೆಯನ್ನು, ಉದ್ಯಮಕ್ಕೆ ನೀಡಿದ ಕೊಡುಗೆ ಮತ್ತು ಪ್ರಭಾವಶಾಲಿಯಾಗಿ ಕಥೆ ಹೇಳುವ ಶೈಲಿಗಾಗಿ, ಪತ್ರಿಕೋದ್ಯಮದಲ್ಲಿ ಪ್ರತಿಷ್ಠಿತ ‘ಕರ್ನಾಟಕ ಮಹಿಳಾ ಸಾಧಕಿ ಪ್ರಶಸ್ತಿ’ಯೊಂದಿಗೆ ಗುರುತಿಸಲಾಗಿದೆ.

ಗೌರಿ ನೀಲಾವರ್
ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾದ ಇವರು ಕಾದಂಬರಿ ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರವಾಗಿ ಮತ್ತು ತಮ್ಮ ನಿರ್ಮಾಣ ಸಂಸ್ಥೆ - ಲಾ ಲೋಬಾ ಫಿಲ್ಮ್ಸ್ ಮೂಲಕ ಜಾಹೀರಾತು ಚಿತ್ರಗಳನ್ನು ನಿರ್ದೇಶಿಸುತ್ತಾರೆ. ಈ ಸಂಸ್ಥೆ ಸಿನಿಮೀಯ ಕರಕುಶಲತೆಯೊಂದಿಗೆ ಸಹಾನುಭೂತಿಯನ್ನು ಬೆರೆಸುವುದಕ್ಕೆ ಹೆಸರುವಾಸಿಯಾಗಿದೆ.

ಪೂರ್ಣಿಮಾ ಮಾಳಗಿಮನಿ
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಣ್ಣ ಕಥೆಗಳು, ಕಾದಂಬರಿಗಳು, ಕವನಗಳು ಮತ್ತು ಲೇಖನಗಳ ಸಮಕಾಲೀನ ಬರಹಗಾರ್ತಿ. ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿಯನ್ನು ಗೆದ್ದ ಇಜಯಾ ಕಾದಂಬರಿಗೆ ಹೆಸರುವಾಸಿಯಾಗಿದ್ದಾರೆ. ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿ ಮತ್ತು ಕೇಂದ್ರ ಸರ್ಕಾರಿ ಸಂಶೋಧನಾ ಸಂಸ್ಥೆಯಲ್ಲಿ ಮಾಜಿ ಜಂಟಿ ಉಪ ನಿರ್ದೇಶಕಿ.

ಶ್ವೇತ್ ಪ್ರಿಯಾ ನಾಯಕ್
ಚಲನಚಿತ್ರ ಮತ್ತು ಜಾಹೀರಾತಿನಲ್ಲಿ ವಿಶಿಷ್ಟವಾಗಿ ದೃಶ್ಯಗಳ ಮೂಲಕ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ಪ್ರಶಸ್ತಿ ವಿಜೇತ ಛಾಯಾಗ್ರಾಹಕಿ. ಉನ್ನತ ಚಲನಚಿತ್ರ ನಿರ್ಮಾಪಕರೊಂದಿಗೆ ಆಗಾಗ್ಗೆ ಸಹಯೋಗಿಯಾಗಿರುವ ಅವರು ಭಾರತದ ಪ್ರಮುಖ ಸೃಜನಶೀಲ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

ಪೂಜಾ ಸುಧೀರ್
ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ ಪದವೀಧರೆ ಮತ್ತು ಪರಮವಾಹ್ ಸ್ಟುಡಿಯೋಸ್ನಲ್ಲಿ ಚಿತ್ರಕಥೆಗಾರ್ತಿಯಾಗಿರುವ ಅವರು ಮೆಚ್ಚುಗೆ ಪಡೆದ ಸಕುಟುಂಬ ಸಮೇತ (2022) ಚಿತ್ರದ ಸಹ-ಲೇಖಕಿಯಾಗಿದ್ದಾರೆ. ಅವರ ಮುಂದಿನ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿದೆ.

ಅಖಿಲಾ ವಿದ್ಯಾಸಂದ್ರ
ಕೆಆರ್ಆರ್ಎಸ್ ಮತ್ತು ಡಿಎಸ್ಎಸ್ಗಳ ಆರಂಭದಿಂದಲೂ ತೊಡಗಿಸಿಕೊಂಡಿರುವ ವಕೀಲೆ ಮತ್ತು ಕಾರ್ಯಕರ್ತೆ. ಅವರು ಕರ್ನಾಟಕ ರಾಜ್ಯ ಮಹಿಳಾ ದೂರದನ್ಯ ವಿರೋಧಿ ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳ ರಕ್ಷಕರ ಜಾಲದ ಸಕ್ರಿಯ ಸದಸ್ಯರೂ ಆಗಿದ್ದಾರೆ.
ಕಾರ್ಯನಿರ್ವಾಹಕ ತಂಡ

ಶಾಂತಲಾ ದಾಮ್ಲೆ
ಶಾಂತಲಾ ದಾಮ್ಲೆ “ಅವಳ ಹೆಜ್ಜೆ” ಚಿತ್ರೋತ್ಸವ ನಿರ್ದೇಶಕಿ. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ಅಮೆರಿಕಾದ ವರ್ಜೀನಿಯಾ ಟೆಕ್ ಯುನಿವರ್ಸಿಟಿಯಿಂದ ಎಂ.ಬಿ.ಎ. ಪದವಿ ಪಡೆದಿದ್ದಾರೆ. ಭಾರತದಲ್ಲಿ 4 ವರ್ಷ, ನಂತರ ಅಮೆರಿಕದಲ್ಲಿ 12 ವರ್ಷ, ಐಟಿ ಮತ್ತು ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಉದ್ಯೋಗದ ಅನುಭವ ಹೊಂದಿದ್ದಾರೆ. 2010 ರಲ್ಲಿ ಭಾರತಕ್ಕೆ ಮರಳಿ, ಭ್ರಷ್ಟಾಚಾರ-ವಿರೋಧಿ, ಮಹಿಳಾ ಸಬಲೀಕರಣ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಲವಿಕ ಗುಬ್ಬಿವಾಣಿ
"ಗುಬ್ಬಿವಾಣಿ ಟ್ರಸ್ಟ್" ನ ಸ್ಥಾಪಕ ಟ್ರಸ್ಟೀ ಮಾಲವಿಕ ಗುಬ್ಬಿವಾಣಿ ಅವರು ಮೈಸೂರಿನ SJCE ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ. ಪದವಿ ಪಡೆದಿದ್ದಾರೆ. ಇನ್ ಫೋಸಿಸ್ನಲ್ಲಿ ಐಟಿ ವೃತ್ತಿಪರರಾಗಿ 15 ವರ್ಷಗಳ ಕೆಲಸದ ಅನುಭವ ಹೊಂದಿರುವುದಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿ ಒಂದು ದಶಕದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಹಲವಾರು ಮಹಿಳಾ ಪರ ಹೋರಾಟಗಳು, ಭ್ರಷ್ಟಾಚಾರ ವಿರೋಧಿ ಅಭಿಯಾನಗಳು, ನಾಗರಿಕರ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು, ಕನ್ನಡ ಪರ ಪ್ರಚಾರಗಳು, ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಉಷಾ ಸಂಪತ್ಕುಮಾರ್
ಮೂಲತಃ ಬೆಂಗಳೂರಿನವರಾದ ಉಷಾ ಸಂಪತ್ಕುಮಾರ್ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಮೈಸೂರಿನ ‘ಸಮತಾ’ ಮತ್ತು ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಶಿಕ್ಷಣದಲ್ಲಿ ಪದವೀಧರೆಯಾಗಿರುವ ಉಷಾ, ವಿಶ್ವ ಮಂಗಳ ಎಜುಕೇಶನ್ ಸೊಸೈಟಿ, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದಂತೆ ಅನೇಕ ಶಾಲೆಗಳಲ್ಲಿ ಶಿಕ್ಷಕಿಯಾಗಿದ್ದರು.

ನವ್ಯ ಶ್ರೀ
ನವ್ಯ ಶ್ರೀ ಸ್ವತಂತ್ರ ಗ್ರಾಫಿಕ್ ಡಿಸೈನರ್. ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠಂನಿಂದ ವಿಜುಯಲ್ ಮೀಡಿಯಾದಲ್ಲಿ B.Sc. ಪದವಿಯನ್ನು ಪಡೆದಿದ್ದು, ಪ್ರಸ್ತುತ ICAT ಡಿಸೈನ್ ಮತ್ತು ಮೀಡಿಯಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿಧ್ಯಾರ್ಥಿನಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮ ನಿರ್ವಹಕರಾಗಿಯೂ ಕೆಲಸ ಮಾಡಿದ ಅನುಭವವಿದ್ದು, ವಿಜುಯಲ್ ಕಮ್ಯೂನಿಕೇಶನ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನಿಪುಣರಾಗಿದ್ದಾರೆ. ಆಕರ್ಷಕ ಕಥೆಗಳನ್ನು ಚಲನಚಿತ್ರಗಳ ಮೂಲಕ ಜಗತ್ತಿಗೆ ತಲುಪಿಸುವುದು ನವ್ಯ ಶ್ರೀ ಯವರ ಕನಸಾಗಿದೆ.

ರೋಹನ್ ದೇವ್ ಪಿ
ರೋಹನ್ ದೇವ್ ಪಿ ಬೆಂಗಳೂರಿನಲ್ಲಿ ವಿಎಫ್ಎಕ್ಸ್ ಕಲಾವಿದ ಮತ್ತು ವೀಡಿಯೊಗ್ರಾಫರ್ ಆಗಿದ್ದು, ದೃಶ್ಯ ಮಾಧ್ಯಮ ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. 3ಡಿ ಸಿನೆಮಾಟೋಗ್ರಫಿ ಮತ್ತು ಡಿಸೈನ್ನಲ್ಲಿ ಪರಿಣತಿ ಹೊಂದಿದ್ದಾರೆ. ವಿಜುವಲ್ ಇಫೆಕ್ಟ್ಸ್ನಲ್ಲಿ ಬ್ಯಾಚೆಲರ್ ಪದವಿಯನ್ನು ಪಡೆದಿದ್ದು, ಚಲನಚಿತ್ರ ನಿರ್ದೇಶನಕ್ಕೆ ಪ್ರವೇಶಿಸಿ ಮನಮೋಹಕ ಸಿನೆಮಾಗಳನ್ನು ಸೃಷ್ಟಿಸುವ ಸಂಕಲ್ಪ ಹೊಂದಿದ್ದಾರೆ.

ಮಾನಸಿ ಬಬಲೇಶ್ವರ
ಮಾನಸಿ ಬಬಲೇಶ್ವರ ಒಬ್ಬ ಉದಯೋನ್ಮುಖ ಚಲನಚಿತ್ರ ನಿರ್ಮಾಪಕಿ. ಇವರು ರೇವಾ ದಿಂದ ಬಿ. ಎ. ಪದವಿ ಮತ್ತು ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ, ಚಲನಚಿತ್ರ ಹಾಗೂ ದೂರದರ್ಶನ ಸಂಶೋಧನೆ ಮತ್ತು ನಿರ್ಮಾಣದಲ್ಲಿ, ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಮಾನಸಿಯವರು ಶಾಟ್ಟರ್ಡ್ ವೋಸ್ ಎಂಬ ಆಂಗ್ಲಭಾಷೆಯ ಕಿರುಚಿತ್ರವನ್ನು ನಿರ್ದೇಶಿಸಿ ಮತ್ತು ನಿರ್ಮಾಣ ಮಾಡಿದ್ದಾರೆ. ರೂರಲ್ ಮೀಡಿಯಾ ಎಂಬ ನಿರ್ಮಾಣ ಸಂಸ್ಥೆಯಿಂದ ಪ್ರಾಯೋಗಿಕ ಅನುಭವವಾಗಿ ದ ರೀಡ್ ಎಂಬ ಬಿಬಿಸಿಯ ಸೀರಿಯಲ್ ನಲ್ಲಿ ಅನುಭವ ಪಡೆದಿದ್ದಾರೆ.

ಶ್ರೀವತ್ಸ ಬಿ.
ಶ್ರೀವತ್ಸ ಬಿ. ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಿಂದ ಬಿಬಿಎ ಪದವೀಧರರಾಗಿದ್ದು, ಬ್ರ್ಯಾಂಡಿಂಗ್ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹವಾಮಾನ ಬಿಕ್ಕಟ್ಟಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಫ್ರೈಡೇಸ್ ಫಾರ್ ಫ್ಯೂಚರ್ ಮತ್ತು ಝಟ್ಕಾ ಸಂಸ್ಥೆಗಳೊಂದಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ದಿಯಾ ಮಿರ್ಜಾ ಮತ್ತು ದಿಶಾ ರವಿಯವರೊಂದಿಗೆ ಕೆಲಸ ಮಾಡಿದ್ದಾರೆ. ಜೊತೆಗೆ, ಡಿಸ್ಟೋಪಿಯಾ ಇಂಡಿಯಾ ಎಂಬ ಪ್ರಾಣಿ ಕಲ್ಯಾಣ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂಟರ್ನ್ಸ್

ಧಾತ್ರಿ ಬಿ.ಎಸ್.
ಬಿ.ಎ. ಎರಡನೇ ವರ್ಷ
ಮೌಂಟ್ ಕಾರ್ಮೆಲ್ ಕಾಲೇಜು

ಮೆಥಿಲಾ ಭಾರದ್ವಾಜ್
ಬಿ.ಎ. ಎರಡನೇ ವರ್ಷ
ಮೌಂಟ್ ಕಾರ್ಮೆಲ್ ಕಾಲೇಜು

ಸ್ಮೃತಿ ಜಿ.ಎಮ್.
ಬಿ.ಎ. ಮೊದಲ ವರ್ಷ
ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜು, ಶಿವಮೊಗ್ಗ

ಸಿರಿಗೌರಿ
ಬಿ.ಬಿ.ಎ. ಎರಡನೇ ವರ್ಷ
NESIAS ಕಾಲೇಜು, ಶಿವಮೊಗ್ಗ

ಇ.ಎ. ಸರಯು
ಬಿ.ಎ. ಎರಡನೇ ವರ್ಷ
ಮೌಂಟ್ ಕಾರ್ಮೆಲ್ ಕಾಲೇಜು

ಸ್ಫೂರ್ತಿ ಎನ್ ಎಂ
ಬಿ. ಎಸ್. ಸಿ. ಮೊದಲ ವರ್ಷ
ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜು, ಶಿವಮೊಗ್ಗ

ದೀಪ್ತಿ ಸುಮನಾ ಕೆ.
ಬಿ.ಎ. ಎರಡನೇ ವರ್ಷ
ಮೌಂಟ್ ಕಾರ್ಮೆಲ್ ಕಾಲೇಜು

ವಿ.ಯು. ಶಿವಾನಿ ಸಿರಿಷಾ
ಬಿ.ಎ. ಎರಡನೇ ವರ್ಷ
ಮೌಂಟ್ ಕಾರ್ಮೆಲ್ ಕಾಲೇಜು































"ಅವಳ ಹೆಜ್ಜೆ ಕಿರುಚಿತ್ರೋತ್ಸವ-2025"ದ ವಿಶೇಷವೇನೆಂದರೆ, ಮಹಿಳೆಯರೇ ತಯಾರಿಸಿದ ಕನ್ನಡ ಕಿರುಚಿತ್ರಗಳಿಗೆ ಮಾತ್ರ ಮೀಸಲಾಗಿರುವ ಸ್ಪರ್ಧೆಯೊಂದನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದು. 2025ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಿರುಚಿತ್ರಗಳ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸಿತ್ತು.. ಅಮೇರಿಕಾದ ಕನ್ನಡತಿಯೊಬ್ಬರು, 14 ವರ್ಷದ ಕಿರಿಯ ಕಲಾವಿದೆಯೂ ಸೇರಿದಂತೆ, ರಾಜ್ಯಾದ್ಯಂತ ವಿವಿಧ ಹಿನ್ನೆಲೆಯ ಮಹಿಳೆಯರು ನಿರ್ದೇಶಿಸಿದ ಸುಮಾರು 60 ಕಿರುಚಿತ್ರಗಳು ಸಲ್ಲಿಕೆಯಾಗಿದ್ದವು.
ಆಯ್ಕೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಸುನಯನ ಸುರೇಶ, ಮಧು ದೈತೋಟ, ಸಂಜೋತಾ ಭಂಡಾರಿ, ಶ್ವೇತ್ ಪ್ರಿಯಾ ನಾಯಕ್, ಗೌರಿ ನೀಲಾವರ್, ಅಖಿಲಾ ವಿದ್ಯಾಸಂದ್ರ, ಪೂಜಾ ಸುಧೀರ್, ಪೂರ್ಣಿಮಾ ಮಾಳಗಿಮನಿ ಇವರನ್ನು ಒಳಗೊಂಡ ಪ್ರತಿಷ್ಠಿತ ತೀರ್ಪುಗಾರರ ತಂಡ ಸೂಕ್ಷ್ಮವಾಗಿ ಪರಿಗಣಿಸಿ ಆಯ್ದ ಕಿರುಚಿತ್ರಗಳ ಮೊದಲ ಪ್ರದರ್ಶನ ಮತ್ತು ಪ್ರಶಸ್ತಿ ವಿಜೇತರ ಘೋಷಣೆ ಜೂನ್ 14, 2025 ರಂದು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC) ನಲ್ಲಿ ನಡೆಯಿತು.
ಚಿತ್ರೋತ್ಸವದ ಮುಖ್ಯ ಅತಿಥಿ, ಖ್ಯಾತ ನಿರ್ದೇಶಕಿ ಡಿ. ಸುಮನ್ ಕಿತ್ತೂರು ಅವರ ಸಮಕ್ಷಮದಲ್ಲಿ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮೊದಲ ಬಹುಮಾನ ₹1 ಲಕ್ಷ ನಗದು ಮತ್ತು "ಅವಳ ಹೆಜ್ಜೆ" ಪ್ರಶಸ್ತಿಯನ್ನು ಪಡೆದ ಕನ್ನಡ ಕಿರುಚಿತ್ರ ಕವಿತಾ ಬಿ ನಾಯಕ್ ನಿರ್ದೇಶನದ "ಅನ್ ಹರ್ಡ್ ಎಕೋಸ್". ಈ ಚಿತ್ರವು ಪ್ರೇಕ್ಷಕರ ಆಯ್ಕೆ ಬಹುಮಾನವನ್ನು ಸಹ ಪಡೆದುಕೊಂಡಿದ್ದು, ಅದರ ಬಲವಾದ ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿದೆ.
ಕ್ಷಮಾ ಅಂಬೆಕಲ್ಲು ಅವರ ಕಿರುಚಿತ್ರ "ಪುಷ್ಪ", ವಿದ್ಯಾರ್ಥಿನಿ ನಿರ್ದೇಶಕಿ ಎಂಬ ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆಯಿತು. ಚೊಚ್ಚಲ ನಿರ್ದೇಶನದ ಇತರ ಮೂರು ಕಿರುಚಿತ್ರಗಳು ಸಹ ನಗದು ಬಹುಮಾನಗಳನ್ನು ಪಡೆದಿವೆ: ಮಂದಾರ ಬಟ್ಟಲಹಳ್ಳಿ ನಿರ್ದೇಶನದ “ದಿ ಲಾಸ್ಟ್ ಹ್ಯಾಪಿ ಕಸ್ಟಮರ್” (2024), ಸಿಂಚನಾ ಶೈಲೇಶ್ ನಿರ್ದೇಶನದ “ಕೇಕ್ವಾಕ್” (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ “ಆನ್ಲೈನ್” (2025).
ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ “ನೀರೆಲ್ಲವೂ ತೀರ್ಥ” (2025) ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.
ಎಂಟು ಆಕರ್ಷಕ ಕಿರುಚಿತ್ರಗಳನ್ನು ಪ್ರದರ್ಶಿಸಿದ ಈ ಉತ್ಸವವು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ಎಂಟು ನಿರ್ದೇಶಕಿಯರೊಂದಿಗಿನ ಪ್ರಶ್ನೋತ್ತರದಲ್ಲಿ ಪ್ರೇಕ್ಷಕರು ಉತ್ಸಾಹಭರಿತ, ಚಿಂತನಶೀಲ ಪ್ರಶ್ನೆಗಳನ್ನು ಅವರ ಮುಂದಿಟ್ಟರು.
ಚಿತ್ರೋತ್ಸವದ ಪ್ರಮುಖ ಆಕರ್ಷಣೆ, ಪತ್ರಕರ್ತೆ ಸುನಯನ ಸುರೇಶ್ ನಿರ್ವಹಿಸಿದ ಚರ್ಚಾಗೋಷ್ಠಿ “ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ” ಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕಿ ರೂಪಾ ರಾವ್ (ಗಂಟು ಮೂಟೆ), ಟೆಂಟ್ ಸಿನೆಮಾ ಶಾಲೆಯ ಸ್ಥಾಪಕ ನಿರ್ದೇಶಕಿ ಶೋಭಾ ಸಿ.ಎಸ್. ಮತ್ತು ಮುಖ್ಯ ಅತಿಥಿ ಡಿ. ಸುಮನ್ ಕಿತ್ತೂರು ಭಾಗವಹಿಸಿದ್ದರು.
ತಮ್ಮ ಜಾತಕಗಳು ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಚಿತ್ರಕ್ಕೆ ಹಣಕಾಸು ಒದಗಿಸಲು ನಿರಾಕರಿಸಿದ ನಿರ್ಮಾಪಕರ ಬಗ್ಗೆ ಸುಮನ್ ಕಿತ್ತೂರು ಒಂದು ಸ್ವಾರಸ್ಯಕರ ಅನುಭವವನ್ನು ಹಂಚಿಕೊಂಡರು - ಇದು ನಿರ್ದೇಶಕರಿಗೆ ಇರುವ ತರ್ಕಹೀನ ಅಡೆತಡೆಗಳ ಉದಾಹರಣೆಯಾಗಿದೆ.
ರೂಪಾ ರಾವ್ ಅವರು ಚಲನಚಿತ್ರೋದ್ಯಮದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ,“ನಿರ್ಮಾಪಕರು ಮತ್ತು ವಿತರಕರು ನನ್ನನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ನನ್ನ ಪುರುಷ ಸಹಾಯಕರೊಂದಿಗೆ ಮಾತನಾಡುತ್ತಿದ್ದರು. ಹಲವು ನಿರಾಕರಣೆಗಳು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ‘ಹುಚ್ಚು ಮತ್ತು ಉತ್ಸಾಹ’ ಇದ್ದರೆ ಮಾತ್ರ ಚಲನಚಿತ್ರ ನಿರ್ದೇಶಕರು ಮುಂದುವರೆಯಲು ಸಾಧ್ಯ” ಎಂದರು.
ಮೊದಲ ಪ್ರದರ್ಶನದಲ್ಲಿ ಲಭಿಸಿದ ಆದರಣೀಯ ಪ್ರತಿಕ್ರಿಯೆ ಮತ್ತು ಬೆಂಬಲದಿಂದ, ಕಿರುಚಿತ್ರಗಳ ಪುನರ್ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಜುಲೈ 12, 2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ನಲ್ಲಿ ಎರಡನೇ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೂರನೇ ಪ್ರದರ್ಶನ ಭಾನುವಾರ, ಸೆಪ್ಟೆಂಬರ್ 21, 2025 ರಂದು ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಸಂಸ್ಕೃತಿ ಅಕಾಡೆಮಿಯಲ್ಲಿ .