top of page

​“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ 2017ರಲ್ಲಿ ಶಾಂತಲಾ ದಾಮ್ಲೆಯವರು ಪ್ರಾರಂಭಿಸಿದ ಸಾಮಾಜಿಕ ಸಂಕಲ್ಪ. ಅವಳ ಹೆಜ್ಜೆ  ಮೊದಲ ಏಳು ವರ್ಷಗಳು ಸತತವಾಗಿ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಗಳು, ಸಾಧಕಿಯರ ಸಂದರ್ಶನ ಸರಣಿಗಳು ಮತ್ತು ವಾರ್ಷಿಕ ವಿನೂತನ ಕಾರ್ಯಕ್ರಮಗಳ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿ, 2024ರಲ್ಲಿ 'ಗುಬ್ಬಿವಾಣಿ ಟ್ರಸ್ಟ್' ನ "ಮಹಿಳಾ ಸಬಲೀಕರಣ" ವಿಭಾಗವಾಗಿ ಹೊಸ ರೂಪ ಪಡೆದಿದೆ.

ಸಾಧನೆಯ ಗುರಿಯನ್ನು ಹೊತ್ತ ಮಹಿಳೆಯರಿಗೆ ದಿಟ್ಟ ಹೆಜ್ಜೆಗಳನ್ನಿಡಲು ಬೇಕಾಗುವ ಕೌಶಲ್ಯಗಳನ್ನು ಕಲಿಸುವುದು ಮತ್ತು ಸಮಾಜದ ಪೂರ್ವಾಗ್ರಹಗಳ ಇತಿಮಿತಿಗಳನ್ನು ದಾಟಿ ತಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಲು ಸಜ್ಜಾಗಿಸುವುದು ಮತ್ತು ಮಹಿಳೆಯರು ಪರಸ್ಪರ ಬೆಂಬಲಕ್ಕೆ ನಿಲ್ಲುವಂಥ ವೇದಿಕೆಯನ್ನು ಒದಗಿಸುವುದು "ಮಹಿಳಾ ಸಬಲೀಕರಣ" ವಿಭಾಗದ ಮುಖ್ಯ ಗುರಿ.

“ಕರ್ನಾಟಕದ ಸಮಕಾಲೀನ ಸಾಧಕಿಯರು” ಎಂಬ ವಿಶಿಷ್ಟ ವೀಡಿಯೊ ಸಂದರ್ಶನ ಸರಣಿ ಮಹಿಳೆಯರ ಆಧುನಿಕ ಚರಿತ್ರೆಯನ್ನು ದಾಖಲಿಸುವ ಪ್ರಯತ್ನ. ಶಿಕ್ಷಣ, ವೈದ್ಯಕೀಯ, ಮಾಧ್ಯಮ, ಕಲೆ, ಸಾಹಿತ್ಯ, ಚಲನಚಿತ್ರ, ರಾಜಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ ಮಾದರಿ ಸಾಧಕಿಯರ ಸಂದರ್ಶನಗಳು ಅವಳ ಹೆಜ್ಜೆ ಯುಟ್ಯೂಬ್ ಚಾನಲ್‌ನಲ್ಲಿ ಲಭ್ಯವಿವೆ. ಅವರ ಅನುಭವಗಳು, ನಡೆದು ಬಂದ ಹಾದಿ, ಕೌಶಲ್ಯ, ಜಾಣ್ಮೆ, ಕನಸಿನ ಗುರಿ ಮುಟ್ಟುವಲ್ಲಿ ಎದುರಿಸಿದ ಅಡಚಣೆಗಳು ಹಾಗೂ ಸವಾಲುಗಳನ್ನು ಎದುರಿಸಿದ ರೀತಿಗಳು ಯುವತಿಯರಿಗೆ ಕಲಿಕೆಯ ಅವಕಾಶವಷ್ಟೇ ಅಲ್ಲ, ಸ್ಪೂರ್ತಿ ಮತ್ತು ಪ್ರೇರಣೆಯಾಗಬಹುದು.

“ಇಡಿ ದಿಟ್ಟ ಹೆಜ್ಜೆ” ಯುವತಿಯರಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿ

 

ಪ್ರತೀ ವರ್ಷ 10ನೇ ಮತ್ತು 12 ನೇ ತರಗತಿಯ ಫಲಿತಾಂಶ ಬಂದಾಗ “ವಿದ್ಯಾರ್ಥಿನಿಯರದೇ ಮೇಲುಗೈ” ಎಂಬ ವರದಿಯನ್ನು ನೋಡುತ್ತೇವೆ. ವಿಪರ್ಯಾಸವೆಂದರೆ, ಅದೇ ಯುವತಿಯರು ಕೆಲವೇ ವರ್ಷಗಳಲ್ಲಿ ತಮ್ಮ ವೃತ್ತಿಗಳಲ್ಲಿ ಹಿಂದೆ ಬೀಳಲು ಆರಂಭಿಸುತ್ತಾರೆ. ಇದನ್ನು ಬದಲಾಯಿಸಿ, ಇತಿಮಿತಿಗಳನ್ನು ದಾಟಬಯಸುವ ಯುವತಿಯರು ತಮ್ಮ ಪೂರ್ಣ ಸಾಮರ್ಥ್ಯದ ಗುರಿಯನ್ನು ಯಶಸ್ವಿಯಾಗಿ ಮುಟ್ಟಲು ಪ್ರೇರೇಪಿಸುವುದು ಅವಳ ಹೆಜ್ಜೆಯ ತರಬೇತಿಯ ಪ್ರಮುಖ ಉದ್ದೇಶ.

 

ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇವೆ. ಗುಂಪು ಚರ್ಚೆ, ವೀಡಿಯೊಗಳು, ನಿಜಜೀವನದ ಉದಾಹರಣೆಗಳು, ಕೇಸ್ ಸ್ಟಡಿ, ಗುಂಪು ಚಟುವಟಿಕೆ, ಮುಂತಾದ ನೂತನ ಕಲಿಕಾ -ವಿಧಾನಗಳನ್ನು ಅಳವಡಿಸಿ ಈ ಕೆಳಕಂಡ ವಿಷಯಗಳಲ್ಲಿ ತರಬೇತಿಯನ್ನು ಕನ್ನಡ ಮತ್ತು ಇಂಗ್ಲೀಷಿನ ಸರಳ ಆಡುಭಾಷೆಯಲ್ಲಿ ನೀಡುತ್ತೇವೆ:

  • ಮಹಿಳೆಯರು ಹಿಂದೆ ಬೀಳುವ ಕಾರಣಗಳ ಅರಿವು

  • ಅಡೆತಡೆಗಳನ್ನು ಜಯಿಸುವ ಸೂತ್ರಗಳು.

  • ಕ್ರಿಯಾತ್ಮಕ ಆಲೋಚನಾ ವಿಧಾನಗಳು

  • ಯಶಸ್ವಿ ಮಹಿಳೆಯರ ಅನುಭವಗಳು

  • ಆತ್ಮವಿಶ್ವಾಸ, ಆತ್ಮಸ್ಥೈರ್ಯ

"ಕನ್ನಡತಿ ಉತ್ಸವ" 2017 ರಿಂದ 2022ರವರೆಗೆ ಅವಳ ಹೆಜ್ಜೆ ವತಿಯಿಂದ ಆಯೋಜಿಸಲಾದ ವಾರ್ಷಿಕ ಹಬ್ಬವಾಗಿತ್ತು. ಕನ್ನಡತಿಯರ ಕಥೆಗಳನ್ನು, ಅನುಭವಗಳನ್ನು ಹಾಗೂ ಕೊಡುಗೆಗಳನ್ನು ವಿವಿಧ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಮೇಲ್ನೋಟಕ್ಕೆ ತಂದು ಒಟ್ಟು ಸಾಂಸ್ಕೃತಿಕ ಸ್ಮೃತಿಯಾಗಿಸುವುದು ಇದರ ಉದ್ದೇಶವಾಗಿತ್ತು. . ಈ ಮೂಲಕ ಸಮಾನತೆಯತ್ತ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಾಮೂಹಿಕ ಚಿಂತನೆಗೆ ಸ್ಪೂರ್ತಿಗೊಳಿಸುವ ಪ್ರಯತ್ನವಾಗಿತ್ತು.  
 

  • 2017 - “ಕನ್ನಡತಿಯ ಹೆಜ್ಜೆ” : ಬೆಂಗಳೂರಿನ “ರಂಗೋಲಿ – ಮೆಟ್ರೊ ಆರ್ಟ್ ಸೆಂಟರ್” ನಲ್ಲಿ  ಚಿತ್ರಕಲಾಕೃತಿ, ಕವಿತೆ, ಲೇಖನ, ಕಿರುಚಿತ್ರಗಳು, ಪ್ರದರ್ಶನ ಕಲೆ ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದೆಯರ ಸ್ತ್ರೀಕೇಂದ್ರಿತ ಕೃತಿಗಳನ್ನು  3 ದಿನ ಪ್ರದರ್ಶಿಸಲಾಗಿತ್ತು. 
     

  • 2018 - "ನನ್ನದೊಂದು ಕಥೆ" : ಮಹಿಳೆಯರೇ ತಯಾರಿಸಿದ 7 ಕಿರುಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬೆಂಗಳೂರಿನ ಗಾಂದಿಭವನದಲ್ಲಿ ಯಶಸ್ವಿಯಾಗಿ ಉದ್ಘಾಟಿಸಿ, ಮೈಸೂರಿನ ಇನ್ಫೋಸಿಸ್ ಸಂಸ್ಥೆ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸಹಾ ಪ್ರದರ್ಶನದೊಂದಿಗೆ ಸಂವಾದ ನಡೆಸಲಾಯಿತು.​​

 

  • 2019 - "ಸ್ತ್ರೀ ನೋಟ" : ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆ ಏರ್ಪಡಿಸಿ, ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಾಟಕ ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಸಲಾಯಿತು. 

  • 2020 -  "ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ" :  ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತಂತೆ, ಮೂರು ದಿನಗಳ ವೆಬಿನಾರ್ ಸಮಾವೇಶ ಏರ್ಪಡಿಸಲಾಗಿತ್ತು.

  • 2021 - "ಆಧುನಿಕ ಬೊಂಬೆ ಹಬ್ಬ" : ಸಮಕಾಲೀನ ಸಾಧಕಿಯರ ಸ್ಪೂರ್ತಿದಾಯಕ ಕಥೆಗಳನ್ನು ಬೊಂಬೆ ಜೋಡಣೆ ಮೂಲಕ ಪ್ರದರ್ಶನ, ಕಾರ್ಟೂನ್ ಗೊಂಬೆಗಳ ವಿಡಿಯೋ (ಅನಿಮೇಷನ್) ಹಾಗೂ ಮಕ್ಕಳಿಂದ "ನನ್ನ ಮೆಚ್ಚಿನ ಮಹಿಳೆ" ವೇಷಭೂಷಣ ಪ್ರದರ್ಶನ ನಡೆಸುವ ಮೂಲಕ ರಾಯಚೂರಿನಲ್ಲಿ ಆಚರಿಸಲಾಗಿತ್ತು.

  • 2022 - "ಮಿಸ್‌ ಮಹಾಲಕ್ಷ್ಮೀ" : ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ರ್‍ಯಾಂಪ್ ವಾಕ್ ಏರ್ಪಡಿಸಲಾಗಿತ್ತು. ಇದರಲ್ಲಿ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ವಿವಿಧ ಉಡುಗೆ ತೊಡುಗೆಗಳ ಮೂಲಕ PASSION SHOW (ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!) ಪ್ರದರ್ಶಿಸಿದರು. ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಒಂದೇ ಕುಟುಂಬದ ಮಹಿಳೆಯರು - ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು - ರ‍್ಯಾಂಪ್ ವಾಕ್ ಮೂಲಕ ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.

    2025ರಿಂದ, ಗುಬ್ಬಿವಾಣಿ ಟ್ರಸ್ಟ್ ಅಡಿಯಲ್ಲಿ, ಕನ್ನಡತಿ ಉತ್ಸವವು ವಾರ್ಷಿಕ "ಅವಳ ಹೆಜ್ಜೆ ಕಿರುಚಿತ್ರೋತ್ಸವ"ವಾಗಿ ರೂಪಾಂತರಗೊಂಡಿದ್ದು, ಮಹಿಳೆಯರ ಕಥೆಗಳಿಗೆ ವೇದಿಕೆಯನ್ನು ಸಿನಿಮಾ ಎಂಬ ಶಕ್ತಿಶಾಲೀ ಮಾಧ್ಯಮದ ಮೂಲಕ ಮುಂದುವರಿಸುತ್ತಿದೆ.

bottom of page